𝗡𝗔𝗠𝗠𝗔 𝗠𝗘𝗦𝗧𝗥𝗨:𝗧𝗛𝗘 𝗔𝗥𝗧𝗜𝗦𝗧𝗜𝗖 𝗩𝗢𝗬𝗔𝗚𝗘 𝗢𝗙 𝗝𝗠𝗦 𝗠𝗔𝗡𝗜 (1948 – 2021)
ದೃಶ್ಯಕಲಾವ್ಯಾಕರಣ ಮೀರಿದ ಆದಿಮಪ್ರಜ್ಞೆಯ ಸ್ಪೋಪಜ್ಞತೆ
1989 ರ ಜೆ. ಎಮ್. ಎಸ್. ಮಣಿಯವರ ಕಲಾಕೃತಿಗಳ ಪ್ರದರ್ಶನವೊಂದರ (ಎಮ್.ಜಿ.ರಸ್ತೆಯಲ್ಲಿದ್ದ ಕೃತ್ತಿಕಾ ಗ್ಯಾಲರಿ ) ನನ್ನ ನೋಟಗಳ ಬರೆಹವೊಂದರ ಶೀರ್ಷಿಕೆ “ಅನಾಟಮಿಯನ್ನು ಮೀರಿದ ಕಲಾವಿದ “(ಸಂಯುಕ್ತ ಕರ್ನಾಟಕ, 7.4.1989, ಕಲಾಸೌರಭ ಪುರವಣಿಯ ಪುಟ 3.)ಎಂದು ಇದ್ದಿತು. ಇಂದಿಗೂ ಆ ಶೀರ್ಷಿಕೆ ಸಮಂಜಸ ಅನ್ನಿಸುತ್ತಿದೆ.
ಶ್ರಮ, ಕುಶಲಕಲಿಕೆ , ಹಡಪದ್ ಮತ್ತು ಸಮಕಾಲೀನರೇ ಅಲ್ಲದೆ ದೃಶ್ಯ ಕಲಾಇತಿಹಾಸದ ಹಲವರ ಕಲಾರೂಪ, ಶೈಲಿ ಮತ್ತು ತಂತ್ರಗಳನ್ನು ತಮ್ಮದೇ ಆದ ತೀವ್ರತೆಯಿಂದ ಗಮನಿಸುತ್ತಿದ್ದವರು. ಕೆನ್ ಕಲಾಶಾಲೆಯ ವಿಶಿಷ್ಟ ಗ್ರಂಥಾಲಯದ ಪುಸ್ತಕಗಳನ್ನು ಚೆನ್ನಾಗಿ ಓದದೆಯೇ,ಬಹಳ ಚೆನ್ನಾಗಿ ನೋಡಿ ಅರಗಿಸಿಕೊಂಡವರು.ಹಡಪದ್ ರವರಲ್ಲಿ ಕಲಿತು ಅವರಲ್ಲಿಯೇ ಶಿಕ್ಷಕರಾಗಿ ಕೆಲಸನಿರ್ವಹಿಸಿ ಕೆನ್ ಕಲಾಶಾಲೆಯ ಪ್ರಾoಶುಪಾಲರಾಗಿ ನಿವೃತ್ತರಾಗಿದ್ದು ಅಸಾಮಾನ್ಯ ಬೆಳವಣಿಗೆಯೇ ಸರಿ. ಜತೆ ಜತೆಗೇ ಬೆಂಗಳೂರಿನಲ್ಲಿ ಅವರ ಮರಣಾನಂತರ 2 retrospective (ಹಿನ್ನೋಟ) ಪ್ರದರ್ಶನಗಳು ಕೃತ್ತಿಕಾ ಮತ್ತು ಎನ್ಜಿಎಮ್ಎ ಗಳಲ್ಲಿ ನಡೆದದ್ದು ಅಸಾಮಾನ್ಯವೇ ಸರಿ.ಹಡಪದ,ಹುಸೇನ್, ಕೆ ಟಿ ಶಿವಪ್ರಸಾದ್ ರವರುಗಳ ಕ್ಯಾನ್ವಾಸ್, ಫ್ರೇಮ್ಗಳನ್ನು ರೂಪಿಸುತ್ತಿದ್ದವರು, ಈ ಎಲ್ಲರ ಸೃಷ್ಟಿಪ್ರಕ್ರಿಯೆಯ ಜೀವಧ್ವನಿಯನ್ನು ಕೇಳಿಸಿಕೊಂಡವರು ಶತಮಾನಗಳ ಒತ್ತಡವನ್ನು ಹೊರಹಾಕುವಂತೆ ಚಿತ್ರಿಸಿದ ಮಣಿ ಅಪಾರ ರೂಪ, ದೃಶ್ಯನಿರ್ಮಿತಿಗೆ ಕಾರಣರಾದರು.
ಸುತ್ತಲಿನ ಎಲ್ಲವನ್ನೂ, ಎಲ್ಲರನ್ನೂ, ಪಂಚ ಭೂತಗಳ ಜೊತೆ ಜೊತೆಗೆ ಮೇಲಿನ ದೈವದತ್ತಲೂ ಗುರಿಇಟ್ಟು ಚಿತ್ರಸಿದವರು.ಸ್ವಚ್ಛoಧ ಕಾವ್ಯದಲಯದಂತಹ ಸೌಂದರ್ಯ ಶಾಸ್ತ್ರೀಯ ಆಟಗಳಲ್ಲಿ ತಾಂತ್ರಿಕ ಪಾರಮ್ಯದ ನಡೆಗಳ ಪ್ರಯತ್ನಗಳು ಇದ್ದವು ಎಂಬುದನ್ನು ಅವರ ನೂರಾರು ಚಿತ್ರಕೃತಿಗಳಲ್ಲಿ ಪ್ರಸ್ತುತ ಬೆಂಗಳೂರಿನ ಎನ್ ಜೆ ಎಮ್ ಎ ಗ್ಯಾಲರಿ ಗಳಲ್ಲಿ ದರ್ಶನಕುಮಾರ್ ವೈ. ಯು ಮತ್ತು ಅಮೃತಾ. ಆರ್ ಕ್ಯೂರೇಟ್ ಮಾಡಿರುವ ಡಿಸೆಂಬರ್ 31,2024ರ ವರೆಗೆ ತೆರೆದಿರುವ “ಮಣಿ ಮೇಸ್ಟ್ರು ” ಶೀರ್ಷಿಕೆಯ ಪ್ರದರ್ಶನದಲ್ಲಿ ನೋಡಬಹುದಾಗಿದೆ. ಅಸಾಮಾನ್ಯ ಕೃತಿಗಳ ಜೊತೆಜೊತೆಗೇ ಹಲವು ಸಾಮಾನ್ಯ, ಹಸಿಹಸಿ ಅಭಿವ್ಯಕ್ತಿಗಳು ಕಾಣಿಸಿ ಕೊಂಡಿರುವುದೂ ಸಹ ಮಣಿಯವರ ಹುಡುಕಾಟದ ವೈವಿಧ್ಯತೆಯನ್ನು ಬಿಂಬಿಸಬಲ್ಲದು.
ತಂಜಾವೂರು ಶೈಲಿಯ ಸೃಷ್ಟಿಯ ಹಲವು ಹಂತಗಳ ಕೆಲವು ಕೃತಿಗಳೂ ಪ್ರದರ್ಶನದಲ್ಲಿವೆ. ಒರಟು ವ್ಯಕ್ತಿತ್ವದ, ಮಾತನಾಡಿದರೆ ಓತಪ್ರೋತ ಹರಿವಿನ ಕನ್ನಡದ ಆಡುಭಾಷೆಯ ಮಣಿ ಯವರ ವೈವಿಧ್ಯಮಯ ಮಾಧ್ಯಮ, ತಂತ್ರಗಳ ರೇಖೆ,ವರ್ಣಚಿತ್ರ, ಕೊಲಾಜ್, ಟ್ಯಾಪೆಸ್ಟ್ರಿ ಹಲವು ತಂತ್ರಗಳ ಗ್ರಾಫಿಕ್ ಪ್ರಿಂಟ್ ಗಳೇ ಅಲ್ಲದೆ, ಕಂಚು ಮತ್ತು ಟೆರಕೋಟ ಶಿಲ್ಪಗಳು ಮೊದಲ ಬಾರಿಯ ನೋಡುಗರಿಗೆ ಅಚ್ಚರಿಯನ್ನೇ ಉಂಟುಮಾಡಬಲ್ಲವು. ಮಣಿಯವರ ಹೆಣ್ಣಿನ ಲೋಕವು ಹಲವು ನೋಟಗಳನ್ನು ನೀಡಬಲ್ಲವು. ಹೆಣ್ಣಿನ ಪ್ರೇಮದ ಹಲವು ಮುಖಗಳಲ್ಲಿ ತಾಯಿಯ ಪ್ರೀತಿ ಹಲವು ಎಳೆಗಳಿವೆ : ಗಂಡು ಹೆಣ್ಣಿನ ಪ್ರೀತಿ, ಪ್ರೇಮ, ಪ್ರಣಯ, ವಿರಹಗಳ ಹಲವು ಮುಖಗಳಿವೆ. ಆದಿಮ ಪ್ರಜ್ಞೆಯ ಪ್ರಾಣಿ / ಮನುಷ್ಯರ ಬೇಟೆಯ ಹಲವು ಮುಖಗಳಿವೆ. ಬಣ್ಣಗಳೊಂದಿಗಿನ ಅವರ ಹಲವು ಆಟಗಳು ಅಮೂರ್ತತೆ(ಅಬ್ಸ್ ಟ್ರಾಕ್ಟನ್ )ಯೇ ಅಲ್ಲದೆ divine ನತ್ತಲ್ಲೂ ಹೆಜ್ಜೆ ಹಾಕಿದ್ದು ಅಸಹಜವೇನಲ್ಲ. ಕೆಲವು ವರ್ಣ /ರೂಪಸಂಯೋಜನೆಗಳ ಪ್ರಾಯೋಗಿಕ ಕೃತಿಗಳಲ್ಲಿ ಮಿಶ್ರ ಮಾಧ್ಯಮವು ಗಮನಸೆಳೆಯುತ್ತದೆ. ಒಂದೆರಡುಶಿಲ್ಪಗಳು ಕರ್ನಾಟಕದ ಆಧುನಿಕ ಸಂಧರ್ಭದ ಶಿಲ್ಪಗಳ ಸಾಲಿಗೆ ಸೇರಲು ಅರ್ಹವಾಗಿವೆ.
ಕೆನ್, ಹಡಪದ್ರವರಿಗೆ ಋಣಿಯಾಗಿರುವ ಮಣಿಯವರು homage to Hadapad ಎನ್ನುಬಹುದಾದ ತೀಕ್ಷ್ ಣತೆ, ತೀವ್ರತೆಗಳಿಂದ ಬದಾಮಿಯ ಜನರನ್ನು ಅನನ್ಯವಾಗಿ, ಹಲವು ಮಾಧ್ಯಮಗಳಲ್ಲಿ ಚಿತ್ರಿಸಿದ್ದಾರೆ. ಅವರ ಸ್ಟುಡಿಯೋದ ಮರುಸೃಷ್ಠಿಯು ಕ್ಯೂರೇಟ್ ಮಾಡಿದವರ ಕಲ್ಪನಾ ಸಾಮರ್ಥ್ಯದ ಬಿಂಬದಂತಿದೆ. ಪ್ರದರ್ಶನವು ನೋಡುಗರಿಗೆ ಮಣಿಯವರ ಹಲವು ಹೊಸ ಲೋಕಗಳನ್ನು ತೋರಬಲ್ಲದು.
–KV Subramanyam