ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯ(ಈ ಹಿಂದಿನ ಸರ್ಕಾರಿ ಕಲೆ &ಕರ ಕುಶಲ ಶಾಲೆ-ದಾವಣಗೆರೆ, ವಿ ವಿ ಲಲಿತಕಲಾ ಮಹಾವಿದ್ಯಾಲಯ ದಾವಣಗೆರೆ) 60 ರ ಸಂಭ್ರಮದಲ್ಲಿರುವ ನಿಮಿತ್ತ ಇಲ್ಲಿ ಕಲಿತು ಹೋದ 2002-03ರಿಂದ2006-07 ರ ಬ್ಯಾಚಿನ ವಿದ್ಯಾರ್ಥಿಗಳು ದಿ-9-12-2024ರಂದು “ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ”ಕಾರ್ಯ ಕ್ರಮವನ್ನು ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದರಲ್ಲದೇ ಅವರ ಬ್ಯಾಚ್ನ ಸಹಪಾಠಿಗಳು ಸೇರಿ ಆ ಮಹಾವಿದ್ಯಾಲಯದ ‘ದೃಶ್ಯ ವಿಶ್ವ ಕಲಾ ಗ್ಯಾಲರಿ’ಯಲ್ಲಿ ಸಮೂಹ ಕಲಾ ಪ್ರದರ್ಶನ ಹಮ್ಮಿಕೊಂಡಿದ್ದುದು ಗಮನೀಯ ಸಂಗತಿ. ಪುಲ್ ಇಂಫೀರಿಯಲ್ ಅಳತೆಯಿಂದ ಪುಟ್ಟ ನೋಟ್ ಬುಕ್ ಅಳತೆಯಲ್ಲಿರುವ ಕಲಾಕೃತಿಗಳು ಅಲ್ಲಿ ಪ್ರದರ್ಶನ ಕಾಣುತ್ತಿವೆ.
ಪೆನ್ಸಿಲ್, ಜಲವರ್ಣ,ಆಕ್ರಿಲಿಕ್, ಪೋಸ್ಟರ್ ಬಣ್ಣ, ಗ್ರಾಫಿಕ್ ಮಾಧ್ಯಮಗಳ ಅಭಿವ್ಯಕ್ತಿಗಳು, ಪೈಬರ್ ದಲ್ಲಿ ಮಾಡಿದ 3ಡಿ ಶಿಲ್ಪಗಳು,, ಎಂಬೋಸ್ಡ ಶಿಲ್ಪ ಗಳು ಅಲ್ಲಿ ಪ್ರದರ್ಶನಗೊಳ್ಳುತ್ತಿವೆ.ಸುಮಾರು 65ಕಲಾಕೃತಿಗಳು ಇಲ್ಲಿವೆ. ವಿನಾಯಕ ಎಸ್ ವಿ ಯವರ ನವ್ಯ ಶೈಲಿಯ -ಅಮೂರ್ತ ಆಕಾರಗಳ ಮುದ್ರಣ ಕಲಾಕೃತಿಗಳು, ರಾಕೇಶ್ ಕೆ .ವಿ ಯವರ ಪಾಪ್ ಕಲಾಕೃತಿಗಳನ್ನು ನೆನಪಿಸುವಂತಿರುವ -ನವ್ಯಕ್ಕೂ ಸೈ ಎನ್ನಬಹುದಾದ ಪೋಸ್ಟರ್ ಬಣ್ಣದಿಂದ ಹಾಳೆಯ ಮೇಲೆ ಮಾಡಿದ ವರ್ಣ ಚಿತ್ರ, ಈ ಕೆಲವರ ಕಲಾಕೃತಿಗಳನ್ನು ಹೊರತು ಪಡಿಸಿದರೆ ಮಿಕ್ಕವರ ಕಲಾ ಪ್ರಸ್ತುತಿಗಳೆಲ್ಲ ನೈಜ -ರಮಣೀಯ ಮಿಶ್ರಿತ’ಸಾಮಾನ್ಯ ಜನಪ್ರಿಯ’ ವಾದವುಗಳು. ಅವರುಗಳ ಪೈಕಿ ಇಂದ್ರಕುಮಾರ್ ,ಅವಿನಾಶ್ ಆರ್ .ಕೆ, ನಾಗರಾಜ್ ಇವರುಗಳ ಕಲಾಕೃತಿಗಳು ಹೆಚ್ಚು ಸುಧಾರಿಸಿದವುಗಳ ಸಾಲಿನಲ್ಲಿ ಸೇರ್ಪಡೆಯಾಗಬಲ್ಲವುಗಳು.ಇಂದ್ರ ಕುಮಾರ್ ರವರ ಪೈಬರ್ ಮಾಧ್ಯಮದ ಸುಮಾರು ನಾಲ್ಕಡಿ ×ನಾಲ್ಕಡಿ ಅಳತೆಯ ಧ್ಯಾನಸ್ಥ ವಿವೇಕಾನಂದರ ಶಿಲ್ಪ ಪ್ರದರ್ಶನಕ್ಕೆ ವಿಶೇಷ ಆಕರ್ಷಣೆ ತಂದಿದುದು ಎನ್ನಲಡ್ಡಿಯಿಲ್ಲ.
ನಿಸರ್ಗ ಚಿತ್ರ ಗಳು, ಕರ್ನಾಟಕದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿರುವ ಶಿಲ್ಪ ಗಳ ಪೆನ್ಸಿಲ್ ಕೃತಿಗಳು, ಹಂಪಿಯ ರಥ ,ಪೋಸ್ಟರ್ ಬಣ್ಣದಲ್ಲಿ ಪೋಸ್ಟರ್ ಮೌಂಟ್ ಹಾಳೆಯ ಮೇಲೆ ಬರೆದ ಕೆಲವು ಪೋಸ್ಟರ್ ವಿನ್ಯಾಸಗಳು ಪ್ರದರ್ಶನದಲ್ಲಿವೆ. 2002-03-2006-07ನೇ ಅವಧಿಯಲ್ಲಿ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿನ ದೃಶ್ಯ ಕಲಾ ಶಿಕ್ಷಣದ ಜಾಡಿನ ಅರಿವು ಪಡೆಯಬೇಕೆಂಬ ಕುತೂಹಲಿ ಪ್ರೇಕ್ಷಕರು ಮತ್ತು ಮೊಬೈಲ್ ದ ವಿಪರೀತ ಗೀಳಿಗೊಳಗಾದ, ನಮ್ಮ ಕಲಾನೈಪುಣ್ಯವನ್ನು ಕಂಪ್ಯೂಟರ್ ಮೂಲಕವೇ ತೋರಿಸುತ್ತೇವೆನ್ನುವ ಇಂದಿನ ದೃಶ್ಯ ಕಲಾ ವಿದ್ಯಾರ್ಥಿ ಸಮುದಾಯ ಕೂಡಾ ಅಗತ್ಯವಾಗಿ ನೋಡಬೇಕಾದ ಕಲಾ ಪ್ರದರ್ಶನವಿದು.
‘ಅವಲೋಕನವೆನ್ನುವುದು ಜಾಣರ /ಪ್ರಜ್ಞಾವಂತರ ಸಹಜ ಗುಣ’. ಹಾಗಾಗಿ ಹಿಂದೆ ‘ನಾವು ಹೀಗಿದ್ದೆವು ‘ಎಂಬ ಹಿನ್ನೋಟ ಒಂದು ಮಧುರಾನುಭೂತಿ ನೀಡುವುದರ ಜೊತೆಗೆ ಇಂದಿನ ನಮ್ಮ ಪರಿವರ್ತನೆಗೆ ಹೋಲಿಸಿಕೊಂಡಾಗ ನಮ್ಮ ದೃಶ್ಯ ಕಲಾ ಪಥದ ನಿಷ್ಕರ್ಷೆಗೆ ಅವಕಾಶ ಮಾಡಿಕೊಡುವ ,ಭವಿತವ್ಯದಲ್ಲಿ ನಮ್ಮ ಕಲಾ ಧೋರಣೆಯ ಸಮ್ಯಕ್ ಮಾರ್ಗದರ್ಶನ ಮಾಡಬಲ್ಲ ದಿಕ್ಸೂಚಿ ಆಗಬಲ್ಲದು. ಆ ದಿಸೆಯಲ್ಲಿ ಇದೊಂದು ಮಹತ್ವದ ಪ್ರದರ್ಶನ. ಅನನ್ಯ ಸಂಭ್ರಮ -2024 ಎಂಬ ಶೀರ್ಷಿಕೆಯ ಈ ಸಮೂಹ ಕಲಾಪ್ರದರ್ಶನದಲ್ಲಿ ಭಾಗಿಗಳೆಂದರೆ(ಪರೋಕ್ಷ &ಪ್ರತ್ಯಕ್ಷ)–ಅನಿಲ್ ಹೆರೂರು, ಅವಿನಾಶ್ ಆರ್ ಕೆ,ಬಸವರಾಜ ಕೆ,ಇಂದ್ರಕುಮಾರ್ ಎಚ್ ಕೆ,ಕಿರಣಕುಮಾರ್ ಎಲ್.ಆರ್, ಕಿರಣ ಎಚ್, ಲಕ್ಷ್ಮಣ ಕೆ,ಮಾರುತಿ ಕಾಮತ್, ಮಲ್ಲಿಕಾರ್ಜುನ ಕೆ,ಮುಪ್ಪಿನಯ್ಯ, ನಮಿತಾ, ನಾಗರಾಜ್, ನವೀನ್ ಎಲ್, ನಾರಾಯಣ ತೊರವಿ, ನೂರ್ಫಾತಿಮಾ, ನಿತ್ಯಾನಂದ ಜೆ ಜೆ,ಪವನ್ ಡಿ.ಪಿ,ರಮೇಶ್ ನಾಯ್ಕ, ರಾಕೇಶ್ ಕೆ ವಿ,ರಾಕೇಶ್ ಎನ್, ರಶ್ಮಿ ಜಿ.ಆರ್, ರವಿಕಿರಣ್ ಬಳೋಜಿ,ಶೀಲಾ ಎ.ಎನ್, ಸಿದ್ಧೇಶ ಡಿ.ಸಿ,ಶ್ರೀಕಾಂತ ಸಿ,ಶ್ವೇತಾ ವಿ.ಟಿ,ಸುದರ್ಶನ ಎಚ್. ಎಸ್, ಸಂದೀಪ್ ಬಿ.ಎಂ,ವಿನಾಯಕ ಎಸ್ ವಿ. ದಿ-15-12-2024 ರವರೆಗೆ ಈ ಪ್ರದರ್ಶನ ನಡೆಯಲಿದೆ. ಪ್ರದರ್ಶನ ಸ್ಥಳ-ದೃಶ್ಯ ವಿಶ್ವ ಕಲಾ ಗ್ಯಾಲರಿ, ದೃಶ್ಯಕಲಾ ಮಹಾವಿದ್ಯಾಲಯ -ದಾವಣಗೆರೆ. ವೀಕ್ಷಣೆ ಸಮಯ-ಮುಂಜಾನೆ 10:30ಗಂಟೆಯಿಂದ ಸಂಜೆ6:00ರ ವರೆಗೆ.
——–ದತ್ತಾತ್ರೇಯ ಎನ್. ಭಟ್ಟ