ನಾನು ಮೆಚ್ಚಿದ ಪುಸ್ತಕ -ಕಲೆ ಒಂದು ಚಿಂತನೆ
——//—–//——//—–
ಪುಸ್ತಕ ಶೀರ್ಷಿಕೆ -ಕಲೆ
ಒಂದು ಚಿಂತನೆ
ಲೇಖಕರು -ಚಂದ್ರಕಾಂತ ಕುಸನೂರ
ಪ್ರಕಾಶಕರು -ವಿಶ್ವನಾಥ ಗುಗ್ಗರಿ
‘ಅಂತಹ್ಕರಣ’ ಆರ್ಟ್ ಅಕ್ಯಾಡಮಿ ,೧೫೮, ರಾಮತೀರ್ಥ ನಗರ , ಬೆಳಗಾವಿ -೧೬.
ಮುದ್ರಕರು -ಒಮೇಗಾ ಆಫ್ ಸೆಟ್,೪೫೭೪,
ಶೆಟ್ಟಿ ಗಲ್ಲಿ ,ಬೆಳಗಾಂ-೦೨
ಬಳಸಿದ ಕಾಗದ -ಮ್ಯಾಪ್ ಲಿಥೋ೧/೮ಕ್ರೌನ್ ಅಳತೆ
ಒಟ್ಟೂ ಪುಟಗಳು -೬೧, ಬೆಲೆ -₹೩೫.
ಪ್ರಥಮ ಮುದ್ರಣ -೨೦೧೧
* * * *
ಈ ಪುಸ್ತಕದ ಲೇಖಕ ಚಂದ್ರಕಾಂತ ಕುಸನೂರ (೧೯೪೧-೨೦೨೦) ಬೆಳಗಾವಿಯಲ್ಲಿ ನೆಲೆ ನಿಂತವರು.ಕತೆ, ನಾಟಕ, ವೈಚಾರಿಕ ಬರಹ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ಕೃಷಿ ಮಾಡಿದ್ದವರು.ಅಲ್ಲದೆ, ಒಳ್ಳೆಯ ಸಂಗೀತ ಕೇಳುಗರು, ಚಿತ್ರಗಳನ್ನು ಕೂಡಾ ರಚಿಸುತ್ತಿದ್ದರು. ಚಿತ್ರ ಶಿಲ್ಪಾ ದಿಗಳ ಕುರಿತು ಗಹನ -ಗಂಭೀರ ಚರ್ಚೆ ,ಚಿಂತನೆ ಹರಿಸುವುದು,ಅದನ್ನು ಬರಹದಲ್ಲಿ ಧೈರ್ಯವಾಗಿ ದಾಖಲಿಸುವ ಜಾಯಮಾನದವರೂ ಆಗಿದ್ದರು. ತಮ್ಮ ವೃತ್ತಿ ಬದುಕಿನ ಅಂಚಿನಲ್ಲಿ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದವರು,ಆ ಅವಧಿಯಲ್ಲಿ ಬೆಳಗಾವಿಗೆ ಕನ್ನಡ ಕಾರ್ಯಕ್ರಮಗಳ ಮೆರುಗು ವಿಶೇಷವಾಗಿ ಒದಗುವಲ್ಲಿ ಹೆಚ್ಚು ಆಸ್ಥಾಪೂರ್ವಕ ಶ್ರಮ ಹಾಕಿದವರು. ಕರ್ನಾಟಕ ಲಲಿತಕಲಾ ಅಕಾಡಮಿಯ ಜೊತೆಗೆ ಇವರಿಗೆ ನಿರಂತರ ಸಂಪರ್ಕ ಇತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಗಣೇಶ ಗುಡಿ ಎಂಬ ದೃಶ್ಯ ಕಲಾವಿದರ ಕುರಿತು ಒಂದು ಪುಸ್ತಕವನ್ನೂ ಬರೆದುಕೊಟ್ಟವರು. ಕಲೆಯ ಕುರಿತು ಅನೇಕ ಬಿಡಿ ಲೇಖನಗಳನ್ನು ಬರೆದಿದ್ದಾರೆ ಕೂಡಾ.
ಪ್ರಸ್ತುತ ಪುಸ್ತಕದಲ್ಲಿ ಚಂದ್ರಕಾಂತ ಕುಸನೂರರು ಕಲೆಯ ಕುರಿತು ತಮ್ಮ ಮನದಾಳದಲ್ಲಿ ಮೂಡಿದ ವಿಚಾರ ತರಂಗಗಳನ್ನು ತಾವು ಓದಿದ,ಗ್ರಹಿಸಿದ ಕಲಾ ಪುಸ್ತಕಗಳು, ಪಾಶ್ಚಾತ್ಯ ದೃಶ್ಯ ಕಲಾ ಪ್ರಭ್ರೃತಿಗಳು-ಚಿಂತಕರು ಕಲೆಯ ಕುರಿತು ಸಾಂದರ್ಭಿಕವಾಗಿ ಹೇಳಿದ ಅಭಿಪ್ರಾಯಗಳನ್ನು ಉಲ್ಲೇಖಿಸಿ, ಅಲ್ಲಲ್ಲಿ ತಮ್ಮ ಗ್ರಹಿಕೆಯ ಸಾರವನ್ನೂ ಒಕ್ಕಣಿಸಿದ್ದಾರೆ. ಈ ಪುಸ್ತಕ ಅವರ ಲೇಖನಗಳಾದ ‘ಕ ಲೆ-ಒಂದು ಚಿಂತನೆ ‘, ‘ಕಾಲ-ಕಲೆ’, ‘ಅಮೂರ್ತ ಕಲೆ(abstract art)’ ಎಂಬವುಗಳ ಸಂಕಲನ.
ಕಲೆ-ಒಂದು ಚಿಂತನೆ ಎಂಬ ಲೇಖನದಲ್ಲಿ ಕಲೆಯನ್ನು ಸಂಶೋಧಿಸಿ,ಅದರ ಕಾಲಮಾನ , ಹಿನ್ನೆಲೆ, ಇತ್ಯಾದಿ ಸಂಗತಿಗಳನ್ನು ಕಂಡುಕೊಳ್ಳಬೇಕಾಗಿದೆ ಸಂಶೋಧಕರು ಅನುಸರಿಸುವ ಮಾನದಂಡಗಳು, ಆದಿಮ ಕಲೆ-ಅದರ ಹಿಂದಿನ ಆಯಾಮ,ಕಾಲಸರಿದಂತೆ ಅಲ್ಲಿನ(ಆದಿಮ ಕಲೆಯಲ್ಲಿನ) ಪ್ರತಿಮೆ,ಪ್ರತೀಕ, ಸಂಕೇತಗಳು ಅವುಗಳ ಅರ್ಥ ವ್ಯಾಪ್ತಿ ಮೀರಿದ್ದು ಇತ್ಯಾದಿ ಸಂಗತಿಗಳ ಸುತ್ತ ತಮ್ಮ ವಿಚಾರ ಲಹರಿ ಹರಿಯಬಿಟ್ಟಿದ್ದರೆ, ‘ಕಾಲ-ಕಲೆ’ ಎಂಬ ಲೇಖನದಲ್ಲಿ ಕಲಾ ಬದಲಾವಣೆ ಎಂಬ ಪ್ರಕ್ರಿಯೆ ನಿಧಾನವಾಗಿ ಆರಂಭವಾಗಿ, ವಿಜ್ಞಾನ -ತಂತ್ರಜ್ಞಾನ ಬೆಳವಣಿಗೆಯೊಂದಿಗೆ ವಿಪರೀತ ವೇಗದಲ್ಲಿ ಸಾಗುತ್ತಿರುವುದನ್ನು ಬಹಳ ದಿಗಿಲು -ಗಾಬರಿ ,ಕಳವಳ-ತಳಮಳದಿಂದ ಉಲ್ಲೇಖಿಸಿದ್ದಾರೆ. ಆ ಲೇಖನದಲ್ಲಿ ಒಂದೆಡೆ ಈ ಕುರಿತು ಹೀಗೆ ಬರೆದಿದ್ದಾರೆ,’ ನಮ್ಮ ಓಟ ಯಾವ ದಿಕ್ಕಿನಲ್ಲಿದೆಯೆಂದು ಗೊತ್ತಿಲ್ಲ.ನಾವು ಓಡುತ್ತಿರುವುದಾದರೂ ಏಕೆ ಎಂದು ನಮಗೆ ಗೊತ್ತಿಲ್ಲ.ಆದರೂ ನಾವು ಓಡಬೇಕಾಗಿದೆ. ಯಾವುದೋ ಗೊತ್ತಿಲ್ಲದ ಒಂದು ಬಹಳ ವೇಗದ ಯಂತ್ರದ ಗಾಲಿಗೆ ನಾವು ಸಿಕ್ಕಿಕೊಂಡಿದೆ.ಇಂಥ ಅಸಹಾಯಕ ಪರಿಸ್ಥಿತಿಯಲ್ಲಿ ಕಲೆ ಮತ್ತು ಸಂಸ್ಕೃತಿಯ ಯಾವ ಯಾವ ಅಂಶಗಳನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕು ಮತ್ತು ಯಾವ ವಿಷಯಗಳನ್ನು ಬಿಟ್ಟು ಬಿಡಬೇಕೆಂಬುದನ್ನು ನಾವು ಅರಿತುಕೊಳ್ಳುವದು ಬಹಳ ಅವಶ್ಯಕ.ನಮ್ಮ ಪರಂಪರೆಯ ಪರಿಚಯ ನಮಗಿರದೇ ಹೋದರೆ ಪರಂಪರೆಯನ್ನು ವರ್ತಮಾನದ ಪರಿಸ್ಥಿತಿಯೊಂದಿಗೆ ಜೋಡಿಸಿಕೊಳ್ಳದಿದ್ದರೆ ನಮ್ಮ ಬದುಕಿನಲ್ಲಿ ದಾಟಲಾಗದ ಒಂದು ಕಂದರ ಉಂಟಾಗುತ್ತದೆ. ಆಗ ನಾವು ಮಾಡುವದೆಲ್ಲ ಅರ್ಥಹೀನವಾಗುತ್ತದೆ.ಕಲಾಕಾರನಿಗೆ ಪರಂಪರೆಯ ಪರಿಚಯ ಬೇಕೇ ಬೇಕು..’ ಈ ಬರೆಹದಲ್ಲಿ ಕಲಾವಿದ ಮಪ್ಪೇಲೆ (maffele), ಚಿಂತಕ ಎಮರ್ಸನ್, ಕೆ.ಡೊಲ್ಗೋವ್, ಕಲಾವಿದ -ಕಲಾವಿಮರ್ಶಕ ಮಾರ್ವಿನ್ ಲೇವಿ , ಪಿಕಾಸೋ, ಹರ್ಬರ್ಟ್ ರೀಡ್ ,ಕಲಾವಿದ ಮುಂಚ್ ಮೊದಲಾದವರ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ.
‘ಅಮೂರ್ತ ಕಲೆ’ ಲೇಖನದಲ್ಲಿ encyclopedia britannica ದಿಲ್ಲಿ ಅಮೂರ್ತ ಕಲೆಯನ್ನು ‘non-objective art, non -representational art ‘ ಎಂದು ಬರೆದಿದೆ ಎಂದು ಉಲ್ಲೇಖಿಸಿದ್ದಾರೆ.ಈ ಕಲೆ ೧೯ನೇ ಶತಮಾನದಲ್ಲಿಯೇ ಆರಂಭ ಆಯಿತು,೧೯೧೫-೨೦ ರ ಅವಧಿ ಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಬ್ಸ್ಟ್ರಾಕ್ಟ ಆರ್ಟ್ ಬೆಳೆಯಿತು, ೧೯೩೦ ರ ಹೊತ್ತಿಗೆ ಯುರೋಪ್ ನಲ್ಲಿ ಬಹಳೇ ಮುಖ್ಯ ವಾಹಿನಿಯಾಗಿ ಪ್ರವರ್ಧಮಾನಕ್ಕೆ ಬಂತು ‘ಎಂದಿದ್ದಾರೆ.
೧೯೩೪ರಲ್ಲಿ ನ್ಯೂಯಾರ್ಕ್ ನಲ್ಲಿ ಹೊಪ್ಮ್ಯಾನ್ ಎನ್ನುವ ಅಮೂರ್ತ ಕಲೆಗೆ ಮಹತ್ವ ಕೊಡುವ ಉದ್ದೇಶದಿಂದ ಒಂದು ಸಂಸ್ಥೆ ಸ್ಥಾಪಿಸಿದ್ದ ಸಂಗತಿಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ,ಅದೇ ಬರೆಹದ ಕೊನೆಗೆ ‘ಪಾರಂಪರಿಕ ಶಿಸ್ತು ಮತ್ತು ಸಂಯಮ,ಶಾಸ್ತ್ರ ಮತ್ತು ವ್ಯಾಕರಣ, ಲಯ ಮತ್ತು ಸಂಕೇತಾತ್ಮಕತೆ ಇವುಗಳನ್ನೆಲ್ಲ ಧಿಕ್ಕರಿಸಿ ಹೊಸದೊಂದು ತರಹದ ಆಸ್ಥೆ ಟಿಕ್ಸ್ ನಿರ್ಮಾಣ ಮಾಡುವುದೇ ಈ ಅಬ್ಸ್ಟ್ರಾಕ್ಟ ಕಲಾವಿದರು ಉದ್ದೇಶ ಇರಬೇಕು ‘ಎಂದು ಊಹಿಸಿದ್ದಾರೆ.ಇದು ಬಹಳ ಸತ್ಯದ ಗ್ರಹಿಕೆಯೂ ಹೌದು. ಪುಸ್ತಕದಲ್ಲಿ ಅಲ್ಲಲ್ಲಿ ಕೆಲವು ಪುಟಗಳಲ್ಲಿ ಸ್ವತಃ ಚಂದ್ರಕಾಂತ ಕುಸನೂರರು ಬಿಡಿಸಿದ ನವ್ಯ, ಸೃಜನಶೀಲತೆಯುಕ್ತ ರೇಖಾಚಿತ್ರಗಳನ್ನು ಅಚ್ಚಿಸಿರುವುದೂ ಕೂಡಾ ಪುಸ್ತಕದ ಆಕರ್ಷಣೆ ಹೆಚ್ಚಿಸಿದೆ.ಅಷ್ಟೇ ಅಲ್ಲ ಮುಖಪುಟಕ್ಕೆ ಕುಸನೂರರದ್ದೇ ಆದ ಒಂದು ಅಬ್ಸ್ಟ್ರಾಕ್ಟ ಶೈಲಿಯ ವರ್ಣಚಿತ್ರದ ಛಾಯಾಚಿತ್ರ ಹಾಕಿರುವುದು ಪುಸ್ತಕದ ಅಂದ ಮತ್ತು ಅರ್ಥವಂತಿಕೆ ಹೆಚ್ಚಿಸಿದೆ ಎಂದರೆ ತಪ್ಪಲ್ಲ.
ಕಲಾವಿದ್ಯಾರ್ಥಿಗಳು, ಕಲಾ ಶಾಲೆಗಳು,ಕಲಾ ಮೇಷ್ಟ್ರುಗಳು ಸಂಗ್ರಹದಲ್ಲಿರಿಸಿಕೊಳ್ಳಬಹುದಾದ ಪುಸ್ತಕವಿದು.
ಇದರ ಲೇಖಕರು, ಪ್ರಕಾಶಕರು, ಮುದ್ರಕರ ಶ್ರಮ ಅಭಿನಂದನೀಯ.
ಲೇಖನ -ದತ್ತಾತ್ರೇಯ ಎನ್.ಭಟ್ಟ.
ಕಲಾ ವಿಮರ್ಶಕ.ದಾವಣಗೆರೆ