ಡಿ ವಿ ಹಾಲಭಾವಿ ಎಂದೇ ಕರ್ನಾಟಕದ ಚಿತ್ರ ಕಲಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ದಾನಪ್ಪ ವಿ ಹಾಲಭಾವಿಯವರು 1907 ರಿಂದ1997 ರ ವರೆಗೆ ಬದುಕಿ , ನಾಡಿನ ಚಿತ್ರ ಕಲಾ ವಲಯವನ್ನು , ಚಿತ್ರ ಕಲಾ ಶಿಕ್ಷಣ ಕ್ಷೇತ್ರವನ್ನು ಬೆಳಗಿದ ಮಹನೀಯರು. ಚಿತ್ರ ಕಲಾ ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದ ಕಾಣ್ಕೆಗೆ ಶ್ರೀ ಕಾರ ಹಾಕಿದ ಸಾಹಸಿಗಳು.ಧಾರವಾಡದ ಸಾಹಿತ್ಯ, ಸಂಗೀತ ಕಂಪಿಗೆ “ಹಾಲಭಾವಿ ಸ್ಕೂಲ್ ಆಫ್ ಆರ್ಟ್” ಎಂಬ ಕಲಾಶಾಲೆ ಸ್ಥಾಪಿಸಿ ಚಿತ್ರ ಕಲಾ ಇಂಪನ್ನು ಬೆರೆಸಿ ಅಲ್ಲಿಂದ ಅನೇಕ ಚಿತ್ರ ಕಲಾ ಪ್ರತಿಭೆಗಳ ವಿಕಸನಕ್ಕೆ ನಾಂದಿ ಹಾಡಿದವರು. ಇದೀಗ ಧಾರವಾಡದ ನೆಲದಲ್ಲಿ ದೃಶ್ಯ ಕಲಾ ಸಾಹಿತ್ಯ ವನ ನಿರ್ಮಿಸಲು ಪಣತೊಟ್ಟಂತಿರುವ ‘ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ -ಧಾರವಾಡ’ ಇದರ ರೂವಾರಿ ,ದೃಶ್ಯ ಕಲಾ ಶಿಕ್ಷಣ ವಿದ್ವಾಂಸ ಪ್ರೊ.ಎಸ್. ಸಿ ಪಾಟೀಲರು ನಿನ್ನೆ ಧಾರವಾಡದ ಜೆ ಎಸ್ ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ದಲ್ಲಿ ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದರಲ್ಲದೆ ನನ್ನನ್ನೂ ‘ಕರ್ನಾಟಕದ ದೃಶ್ಯಕಲಾ ಧೀಮಂತರು’ ಪುಸ್ತಕ ಕುರಿತು ಮಾತಾಡಲು ಆಹ್ವಾನಿಸಿದ್ದರಿಂದ ಡಿ ವಿ ಹಾಲಭಾವಿ ಕಲಾಗ್ಯಾಲರಿ ಸಂದರ್ಶಿಸುವ ಸದವಕಾಶ ತನ್ನಿಂತಾನೇ ಕೂಡಿಬಂತು,ಪ್ರೊ.ಎಸ್. ಸಿ ಪಾಟೀಲ್ ಸಾಹೇಬರು ನಮ್ಮೆಲ್ಲರನ್ನೂ ಸ್ವಯಂ ಪ್ರೇರಣೆಯಿಂದ ಡಿ ವಿ ಹಾಲಭಾವಿ ಕಲಾಗ್ಯಾಲರಿಗೆ ಕರೆದೊಯ್ಯುವುದರ ಮೂಲಕ. ಈ ಚಿತ್ರದಲ್ಲಿ ಪ್ರೊ.ಎಸ್. ಸಿ ಪಾಟೀಲರು,ಜೆ ಎಸ್ ಎಸ್ ದ ಆಡಳಿತಾಧಿಕಾರಿ(ನಿವೃತ್ತ ಕೆ ಎ ಎಸ್)ಎಸ್. ಜಿ.ಬಿರಾದಾರ್ ಸರ್,ಜೆ ಎಸ್ ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ಪ್ರಾಚಾರ್ಯ ಡಾ.ಬಿ.ಎಮ್. ಪಾಟೀಲ್ ಸರ್, ನಾನು(ದತ್ತಾತ್ರೇಯ ಎನ್. ಭಟ್ಟ),ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿಯ 69ನೇ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ಡಾ.ಉಪಾಧ್ಯಾಯ ಮೂಡುಬೆಳ್ಳೆ,ಶ್ರೀ ಜಗತಾಪ್,ಶ್ರೀ ಮಹಾದೇವ ಕವಿಶೆಟ್ಟಿ, ಶ್ರೀ ಮಹಾಲಿಂಗಪ್ಪ, ಡಾ. ರೆಹಮಾನ್ ಪಟೇಲ್, ಮತ್ತಿತರ ಗಣ್ಯರು ಇದ್ದಾರೆ.
ಡಿ.ವಿ.ಹಾಲಭಾವಿ ಆರ್ಟ್ ಗ್ಯಾಲರಿ ಹೊಕ್ಕು ಅವರ ಕಲಾಕೃತಿಗಳ ಎದುರು ನಿಂತೊಡನೆ ಅಲ್ಲಿ ನಾನು ಕಲಿಯುತ್ತಿದ್ದ ದಿನಗಳಲ್ಲಿ ಡಿ ವಿ ಹಾಲಭಾವಿಯವರು ಕೋಟು ,ಟೈ ದಿರಿಸಿನಲ್ಲಿ ಪ್ರತೀ15ದಿನಗಳಿಗೊಮ್ಮೆ ಸ್ಕೂಲ್ ಗೆ ಬಂದು ನಮಗೆ ಅವರದೇ ಆದ ಶೈಲಿಯಲ್ಲಿ ತೆಗೆದುಕೊಳ್ಳುತ್ತಿದ್ದ ಕಲಾ ಇತಿಹಾಸ ತರಗತಿ ನೆನಪು ,ಕಣ್ಮುಚ್ಚಿ ಅವರು ಕರಿಹಲಗೆಯ ಮೇಲೆ ಹಾಕುತ್ತಿದ್ದ ಭಾರತ ದೇಶದ ನಕಾಶೆ, ಅವರ ವಿದ್ಯಾರ್ಥಿ ದಿನಗಳ ಬಾಂಬೆ ಜೆ ಜೆ ಕಲಾಶಾಲೆಯ ಬಣ್ಣನೆ…ಇವೆಲ್ಲ ನನ್ನ ಮನಃಪಟಲದಲ್ಲಿ ನಾ ಮುಂದು,ತಾ ಮುಂದು ಎಂದು ನುಗ್ಗಿ ಬಂದವು.
ಈ ಅಪೂರ್ವ ಅವಕಾಶ ಒದಗಿಸಿದ ಪ್ರೊ.ಎಸ್ ಸಿ ಪಾಟೀಲ್ ಸರ್ ರವರಿಗೆ ಅನಂತ ಧನ್ಯವಾದಗಳು.(ಛಾಯಾಗ್ರಹಣ- ಶ್ರೀ ಯುತ ಶರಣ್ ಹೇಡೆ)
—–ದತ್ತಾತ್ರೇಯ ಎನ್. ಭಟ್ಟ (FB)