ಖ್ಯಾತ ಚಿತ್ರ ಕಲಾವಿದ, ಕಲಾ ಶಿಕ್ಷಕ,ಆತ್ಮೀಯ ಗೆಳೆಯ, ಸರಳ,ಸಜ್ಜನಿಕೆಯ ಕಾಶಿನಾಥ್ ಕಾಳೆಗೆ….ಜನ್ಮ ದಿನದ ಹಾರ್ದಿಕ ಶುಭಾಶಯಗಳು
ನಾಡಿನ ಹೆಮ್ಮೆಯ ಸುಪ್ರಸಿದ್ಧ ಚಿತ್ರಕಲಾವಿದ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ನಾಡೋಜ ಡಾ. ವಿ. ಟಿ. ಕಾಳೆ ಅವರ ಸುಪುತ್ರ ಕಾಶಿನಾಥ್ ಕಾಳೆ , ತಂದೆಯ ಕಲಾ ಸಿರಿವಂತಿಕೆಯ ನೆರಳಲ್ಲೇ ತಮ್ಮ ಕಲಾ ಪ್ರತಿಭೆಯನ್ನು ಅರಳಿಸಿಕೊಂಡ ಪ್ರಬುದ್ಧಚಿತ್ರಕಲಾವಿದ…!
ತಮ್ಮ ತಂದೆಯವರು ಕಲಿತ, ಉಪನ್ಯಾಸಕರಾಗಿ ಕಲಿಸಿದ ಗದಗದ ವಿಜಯ ಕಲಾ ಶಾಲೆಯಲ್ಲೇ ತಾವು ಏಳು ವರ್ಷಗಳ ಕಾಲ ಚಿತ್ರಕಲೆಯನ್ನು ಅಭ್ಯಸಿಸಿ, ಒಬ್ಬ ಒಳ್ಳೆಯ ಚಿತ್ರಕಲಾವಿದರಾಗಿ ರೂಪು ಗೊಂಡವರು. ಕಲೆಯನ್ನೇ ಧ್ಯಾನಿಸುತ್ತಾ, ವೃತ್ತಿಯಾಗಿ ತೆಗೆದುಕೊಂಡು ದಿನಕ್ಕೆ 8- 10 ಗಂಟೆಗಳ ಕಾಲ ಚಿತ್ರ ರಚನೆಯಲ್ಲೇ ಮುಳುಗಿ, ಹಲವು ವರ್ಷಗಳಿಂದ ಚಿತ್ರ ಕಲಾರಂಗದಲ್ಲಿ ಸಾಧನೆ ಮಾಡುತ್ತಿರುವ ಕಾಶಿನಾಥ್, ದೆಹಲಿ ಮತ್ತು ಬೆಂಗಳೂರು ಲಲಿತ ಕಲಾ ಅಕಾಡೆಮಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ 50ಕ್ಕೂ ಹೆಚ್ಚು ಚಿತ್ರ ಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಬ್ರೆಜಿಲ್ ನ ಮೂಸಾ ಆರ್ಟ್ಮ್ಯೂಸಿಯಂನಲ್ಲಿನಡೆದಕಲಾಪ್ರದರ್ಶನದಲ್ಲಿಯೂ ಪಾಲ್ಗೊಂಡಿದ್ದಾರೆ. ಅಲ್ಲದೇ ಇದುವರೆಗೆ ಸುಮಾರು 15 ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ಇವರ 16 ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದೇ 17 ರಿಂದ 23ರವರೆಗೆ ಮುಂಬೈನ ಜಹಾಂಗೀರ್ ಕಲಾ ಅಕಾಡೆಮಿಯಲ್ಲಿ ನಡೆಯಲಿದೆ.ಇವರ ನೂರಕ್ಕೂ ಹೆಚ್ಚು ಚಿತ್ರ ಕಲಾಕೃತಿಗಳು ಅನೇಕ ಖಾಸಗಿ ವ್ಯಕ್ತಿಗಳ ಸಂಗ್ರಹದಲ್ಲಿ ಮತ್ತು ಗ್ಯಾಲರಿಗಳಲ್ಲಿ ಸ್ಥಾನ ಪಡೆದು ಕೊಂಡಿವೆ.
ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಸೇರಿದಂತೆ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ, ದಸರಾ ಪ್ರಶಸ್ತಿ , ಕಿರುಮಕ್ಕಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.ಇವರ ಕಿರಿಯ ಸಹೋದರ ಶ್ರೀನಾಥ್ ಕಾಳೆ ಕೂಡ ಒಳ್ಳೆಯ ಚಿತ್ರಕಲಾವಿದರಾಗಿದ್ದು, ದೇಶ ವಿದೇಶಗಳಲ್ಲಿ ಇವರ ಚಿತ್ರ ಕಲಾ ಪ್ರದರ್ಶನಗಳು ನಡೆದಿವೆ.
“ಕರ್ನಾಟಕದ ಚಿತ್ರಕಲೆಯಲ್ಲಿ ಬಣ್ಣದ ಬದುಕು”. ಇವರ ಪ್ರಕಟಿತ ಕೃತಿ. ಕಲಾ ವಿದ್ಯಾರ್ಥಿಗಳಿಗೆ ಚಿತ್ರ ಕಲೆ ಮತ್ತು ಬಣ್ಣಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಮೂಲ್ಯ ಕೃತಿಯಾಗಿದೆ.
ಕಾಶಿನಾಥ್ ಮತ್ತು ನನ್ನ ಸ್ನೇಹ ಬಹಳ ವರ್ಷಗಳದ್ದು. ಅವರ ಕುಟುಂಬದವರೆಲ್ಲರೂ ನನಗೆ ಪರಿಚಿತರು.ದೇವರು ಕಾಶಿನಾಥ್ ಮತ್ತು ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯ ಯಶಸ್ಸು ಕೀರ್ತಿ ಸಂತೋಷ ನೆಮ್ಮದಿಯನ್ನು ನೀಡಲಿ ಎಂದು ಮನಃ ಪೂರ್ವಕ ಹಾರೈಸುವೆ.
-ಬೋಪಯ್ಯ ಚೋವಂಡ
ಪತ್ರಕರ್ತರು, ಆಪ್ತ ಸಮಾಲೋಚಕರು.