ಕೆ. ವಿ. ಸುಬ್ರಹ್ಮಣ್ಯಂ
On the birthday of great name in art KV Subramanyam Sir
ಕೆ. ವಿ. ಸುಬ್ರಹ್ಮಣ್ಯಂ ಕಲಾ ವಿಮರ್ಶಕರಾಗಿ, ಕಲಾವಿದರಾಗಿ, ಶಿಕ್ಷಕರಾಗಿ, ಕೃತಿ ರಚನಕಾರರಾಗಿ ನಾಡಿನ ಗಣ್ಯಹೆಸರು.
ಕೆ.ವಿ. ಸುಬ್ರಹ್ಮಣ್ಯಂ 1949ರ ಡಿಸೆಂಬರ್ 18ರಂದು ಜನಿಸಿದರು. ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರು. ಚಿತ್ರಕಲಾವಿದರಾಗಿ, ವಿಮರ್ಶಕರಾಗಿ ಹಲವು ಕಲಾಪ್ರಕಾರದ ಕೃತಿರಚನೆ ಮಾಡಿರುವ ಸುಬ್ರಹ್ಮಣ್ಯಂ, ಗಂಭೀರ ಕಲಾ ಚಿಂತಕರು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ.
ಕೆ.ವಿ. ಸುಬ್ರಹ್ಮಣ್ಯಂ ಲಲಿತಕಲಾ ಅಕಾಡೆಮಿ ಸದಸ್ಯರಾಗಿ, ವಾರ್ತಾಪತ್ರದ ಸಂಪಾದಕರಾಗಿ ಸಹಾ ಅರ್ಥಪೂರ್ಣ ಕೆಲಸ ಮಾಡಿದ್ದಾರೆ.
ಸುಬ್ರಹ್ಮಣ್ಯಂ ಕನ್ನಡದಲ್ಲಿ ಕಲಾಲೋಕದ ಮೌಲ್ಯಯುತ ಕೃತಿಗಳಿಗೆ ಹೆಸರಾದವರು. ಕರ್ನಾಟಕದ ಆಧುನಿಕ ಶಿಲ್ಪಕಲೆ, ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ, ಶಿಲಾಶ್ರಯ ಕಲೆಯ ದೃಶ್ಯಧ್ಯಾನ, ಕಲಾಸಂವೇದನೆಯ ಒಳನೋಟಗಳು, ವೆಂಕಟಪ್ಪ: ಸಮಕಾಲೀನ ಪುನರವಲೋಕನ, ಮುಖಗಳೊಂದಿಗೆ ಮುಖಾಮುಖಿ, ವೆಂಕಟಾಚಲಪತಿ ಕನ್ನಡ ಶಿಲ್ಪಕಲೆಯ ಸಮಕಾಲೀನ ಜಕಣಾಚಾರಿ, ರೇಖಾರಾಮಾಯಣ, ಬಿ. ಜಯರಾಂ: ಸಮಕಾಲೀನ ದೃಶ್ಯಕಲೆಯ ಸಾಕ್ಷೀಪ್ರಜ್ಞೆ, ಇನ್ಸ್ಟಾಲೇಶನ್ ಕಲಾ ಪ್ರಪಂಚ, ಮಹಾವಿಷ್ಣು ನಿಧಿ: ದೇವನಹಳ್ಳಿ ಚನ್ನಕೇಶವ ಆಚಾರ್ಯರ ರೇಖಾಚಿತ್ರಗಳು, ಎಸ್. ಜಿ. ವಾಸುದೇವ್ ಮುಂತಾದ ಅನೇಕ ಕೃತಿಗಳಿಗೆ ಸುಬ್ರಹ್ಮಣ್ಯಂ ಖ್ಯಾತರಾಗಿದ್ದಾರೆ. ಇದಲ್ಲದೆ ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಅವರ ಅಮೂಲ್ಯ ಬರಹಗಳು ನಿರಂತರ ಪ್ರಕಟಗೊಳ್ಳುತ್ತಿವೆ. ಕೆ.ವಿ. ಸುಬ್ರಹ್ಮಣ್ಯಂ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಚೆನ್ನೈನ ಯುನೈಟೆಡ್ ರೈಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಫೆಲೋ, ಹರ್ಯಾಣದ ಸುಭದ್ರಾ ಕುಮಾರಿ ಚೌವ್ಹಾಣ ಶತಮಾನೋತ್ಸವ ಸಮ್ಮಾನ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜೀವಮಾನದ ಸಾಧನೆ ಪುರಸ್ಕಾರ, ಕಲಬುರಗಿಯ ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯ ‘ದೃಶ್ಯಭೂಷಣ ಪ್ರಶಸ್ತಿ’, ಬೆಂಗಳೂರು ಆರ್ಟ್ ಫೌಂಡೇಷನ್ನಿನ ‘ಕಲಾಧ್ಯಾನ್’ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿವೆ. ಗಾಯತ್ರಿ ಮಂತ ಅವರು ಕೆ. ವಿ. ಸುಬ್ರಹ್ಮಣ್ಯಂ ಅವರ ದೃಶ್ಯಕಲಾ ಸಾಹಿತ್ಯ ಎಂಬ ಕೃತಿ ರಚಿಸಿದ್ದಾರೆ
ಹಿರಿಯರೂ, ನಮ್ಮೆಲ್ಲರಿಗೆ ಅಕ್ಕರೆಯ ವೃಷ್ಟಿಯನ್ನು ಸದಾ ಹರಿಸುತ್ತಿರುವ ಕೆ.ವಿ. ಸುಬ್ರಹ್ಮಣ್ಯಂ ಸಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
COURTESY:
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ’ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)