Live Stream

[ytplayer id=’22727′]

| Latest Version 8.0.1 |

State News

ಕುಂಚ ಬ್ರಹ್ಮ ಕಾಳೆ ಮಾಸ್ತರಗೆ ‘ನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ’

ಕುಂಚ ಬ್ರಹ್ಮ ಕಾಳೆ ಮಾಸ್ತರಗೆ ‘ನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ’

ಕುಂಚ ಬ್ರಹ್ಮ ಕಾಳೆ ಮಾಸ್ತರಗೆ ನಾಡೋಜ
ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ
————————————————————
ಕರ್ನಾಟಕದ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದ ಇತಿಹಾಸದಲ್ಲಿ ಖ್ಯಾತ ಚಿತ್ರ ಕಲಾವಿದರಾಗಿ, ರಂಗಭೂಮಿ ನಟರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ , ಚಿಂತಕರಾಗಿ ದುಡಿದಿರುವ ಸಂಡೂರಿನ ನಾಡೋಜ ವಿ.ಟಿ.ಕಾಳೆಯವರಿಗೆ “ನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ” ಒಲಿದು ಬಂದಿದೆ.


ಈ ನಾಡಿನ ಖ್ಯಾತ ಜಾನಪದ ತಜ್ಞ, ರಂಗ ಭೂಮಿಯ ಶ್ರೇಷ್ಠ ತಜ್ಞ , ನಮ್ಮ ಬಳ್ಳಾರಿಯ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಗೆ ಬಹಳ ಮೌಲ್ಯವಿದೆ, ಮಹತ್ವವಿದೆ. ಬಳ್ಳಾರಿಯಲ್ಲಿ ಇದೇ ಬೆಳಗಲ್ಲು ವೀರಣ್ಣನವರು ಈ ಹಿಂದೆ ಸ್ಥಾಪಿಸಿದ ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್ , ಕಾಳೆ ಮಾಸ್ತರ್ ಅವರಿಗೆ ಈ ಪ್ರಶಸ್ತಿ ಘೋಷಿಸಿದ್ದು,ಹೆಮ್ಮೆಯನಿಸಿದೆ.
“ಪ್ರವಾದಿ ಬಸವೇಶ್ವರ” ಮನೆ ಕಟ್ಟಿಸಿದ, “ಸ್ವಾತಂತ್ರ್ಯ ಸಂಗ್ರಾಮ”ಮಕ್ಕಳ ಮದುವೆ ಮಾಡಿಸಿದ:
————————————————————
ನಾಡೋಜ ಬೆಳಗಲ್ಲು ವೀರಣ್ಣನವರ “ಪ್ರವಾದಿ ಬಸವೇಶ್ವರ ” , “ಭಾರತ ಸ್ವಾತಂತ್ರ್ಯ ಸಂಗ್ರಾಮ, “ಬಾಪು”, “ಜಾನ್ಸಿ ರಾಣಿ ಲಕ್ಷ್ಮಿ ಬಾಯಿ”, ಸೇರಿದಂತೆ ಹತ್ತಾರು ತೊಗಲುಗೊಂಬೆಯಾಟಗಳಿಗೆ ಇದೇ ನಮ್ಮ ಸಂಡೂರಿನ ವಿ.ಟಿ. ಕಾಳೆ ಮಾಸ್ತರ್ ಅವರು ರೇಖಾ ಚಿತ್ರಗಳನ್ನು ಬರೆದುಕೊಟ್ಟಿದ್ದರು. ವೀರಣ್ಣನವರ ತೊಗಲುಗೊಂಬೆಯಾಟದ ಒಂದೊಂದು ರೂಪಕಗಳು ಸಾವಿರಾರು ಪ್ರದರ್ಶನ ಕಂಡಿವೆ. ಹೆಮ್ಮೆಯ ಸಂಶೋಧಕ ಡಾ.ಎಂ. ಎಂ. ಕಲಬುರ್ಗಿ ರಚಿಸಿರುವ “ಪ್ರವಾದಿ ಬಸವೇಶ್ವರ” ರೂಪಕಕ್ಕೆ ಬರೆದ ಕಾಳೆ ಮಾಸ್ತರರ ರೇಖಾ ಚಿತ್ರಗಳು ಕುಣಿದಿದ್ದು, ಇನ್ನೂ ಜನಮಾನಸದಲ್ಲಿ ಹಾಗೆಯೇ ಉಳಿದಿವೆ. ಇನ್ನೂ ಬಳ್ಳಾರಿಯ ವೈ. ರಾಘವೇಂದ್ರ ರಾವ್ ಅವರು ರಚಿಸಿದ “ಭಾರತ ಸ್ವಾತಂತ್ರ್ಯ ಸಂಗ್ರಾಮ” ರೂಪಕದ ತೊಗಲು ಗೊಂಬೆಗಳ ರೇಖಾ ಚಿತ್ರಗಳು ಕಾಳೆ ಮಾಸ್ತರ್ ಕುಂಚದಲ್ಲಿ ಅರಳಿದ್ದು, ಒಂದೊಂದು ಪಾತ್ರಕ್ಕೂ ಒಂದೊಂದು ರೇಖಾ ಚಿತ್ರ ರಚಿಸಿ ಬೆಳಗಲ್ಲು ವೀರಣ್ಣ ಅವರಿಗೆ ಕೊಟ್ಟು ಅವರ ಘನತೆ ಹೆಚ್ಚಿಸಿದ್ದರು. ಈ ಎಲ್ಲ ತೊಗಲು ಗೊಂಬೆಗಳೇ ಅವರು ಬಹುದೊಡ್ಡ ಜಾನಪದ ತಜ್ಞರಾಗಲು ಕಾರಣವಾಯಿತು. ಇವತ್ತು “ತೊಗಲುಗೊಂಬೆಯಾಟ ಅಂದರೆ ಬೆಳಗಲ್ಲು ವೀರಣ್ಣ, ಬೆಳಗಲ್ಲು ವೀರಣ್ಣ ಅಂದರೆ ತೊಗಲುಗೊಂಬೆಯಾಟ” ಎಂಬಂತಾಗಿದೆ. ಇಷ್ಟೊಂದು ಪ್ರಬುದ್ಧ ಮಾನಕ್ಕೆ ಬೆಳೆಯಲು ಕಾಳೆ ಮಾಸ್ತರ್ ಬರೆದುಕೊಟ್ಟ ರೇಖಾಚಿತ್ರಗಳು ಕಾರಣ ಎಂದು ಸ್ವತಃ ಬೆಳಗಲ್ಲು ವೀರಣ್ಣನವರೇ ಹೇಳಿದ್ದಾರೆ.
ಅವರು ನನಗೆ ಆಗಾಗ ಹೇಳುತ್ತಿದ್ದ ಮಾತೊಂದು ನೆನಪಿದ್ದು, ಇಲ್ಲಿ ಸ್ಮರಿಸುವೆ. “ಬಾಪು” ಮನೆ ಕಟ್ಟಿಸಿಕೊಟ್ಟರೆ “ಸ್ವಾತಂತ್ರ್ಯ ಸಂಗ್ರಾಮ” ಗೊಂಬೆಯಾಟ ಮಕ್ಕಳ ಮದುವೆ ಮಾಡಿಸಿತು. ವೈ.ರಾಘವೇಂದ್ರರಾವ್ , ಗಂಗಾಧರ ಪತ್ತಾರ ಅವರ ಸಾಹಿತ್ಯ, ಕಾಳೆ ಮಾಸ್ತರರ ಕಲೆ ನನ್ನ ಕೈಹಿಡಿಯಿತು ತಿಪ್ಪೇಸ್ವಾಮಿಯವರೇ ಎಂದು ಹೇಳಿದ್ದು ಇನ್ನೂ ನೆನಪಿದೆ.
ತೊಗಲುಗೊಂಬೆಯಾಟದ ಮಾಂತ್ರಿ ಬೆಳಗಲ್ಲು ವೀರಣ್ಣ ಅವರ ಹೆಸರಿನ ಈ ಪ್ರಶಸ್ತಿಯನ್ನು ಕಾಳೆ ಮಾಸ್ತರ್ ನೀಡಿ ಬಳ್ಳಾರಿಯ ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್ ತನ್ನ ಗೌರವ ಹೆಚ್ಚಿಸಿಕೊಂಡಿದೆ.
ಪ್ರಶಸ್ತಿ ಪ್ರದಾನ:
ಕಾಳೆ ಮಾಸ್ತರರು ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ದಿನಾಂಕ 27.04.2025 ರಂದು ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಂಸದ ಈ ತುಕಾರಾಮ್, ಗಂಗಾವತಿಯ ಸುಳೇಕಲ್ ಬೃಹನ್ಮಠದ ಪರಮಪೂಜ್ಯ ಭುವನೇಶ್ವರ ತಾತನವರು, ಅರಳಹಳ್ಳಿಯ ರಾಜರಾಜೇಶ್ವರಿ ಬೃಹನ್ಮಠ ಗವಿ ಸಿದ್ದಯ್ಯ ತಾತನವರ ಸಮ್ಮುಖದಲ್ಲಿ ನಾಡೋಜ ವಿ.ಟಿ. ಕಾಳೆಯವರು ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯೆನಿಸಿದೆ.


ನಾಡೋಜ ವಿ.ಟಿ.ಕಾಳೆಯವರನ್ನು ಕರ್ನಾಟಕದ “ಕುಂಚ ಬ್ರಹ್ಮ” ಎಂದು ಕರೆದರೆ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು
“ನಾದಬ್ರಹ್ಮ” ಎಂದು ಕರ್ನಾಟಕದ ಜನ ಅಭಿದಾನ ನೀಡಿದ್ದಾರೆ. ಇದು ನಮ್ಮ ಬಳ್ಳಾರಿ ಜಿಲ್ಲೆಗೆ ಗೌರವವೆನಿಸಿದೆ.
ಬಳ್ಳಾರಿಯಲ್ಲಿ ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ವಿ.ಟಿ.ಕಾಳೆ ಮಾಸ್ತರ್ ಅವರು ಭೂಮಿ ತೂಕದ ವ್ಯಕ್ತಿಗಳು. ಈ ವ್ಯಕ್ತಿಗಳ ಕಲಾ ಚಿತ್ರಗಳು ದೇಶ- ವಿದೇಶಗಳಲ್ಲಿ ಕರ್ನಾಟಕದ ಘನತೆಯನ್ನು ಹೆಚ್ಚಿಸಿವೆ.
ಕರ್ನಾಟಕದ ಹಿರಿಯ ನ್ಯಾಯವಾದಿ ಡಾ.ಸಿ.ಎಸ್. ದ್ವಾರಕಾನಾಥ್ ಅವರು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ” ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ “ಎಂದು ಕರೆಯಲು ಕೊಟ್ಟ ಶೀರ್ಷಿಕೆಗೆ ನಮ್ಮ ಕಾಳೆಸಾಹೇಬರು ಬರೆದಿರುವ ಬಸವಣ್ಣನವರ ಚಿತ್ರ ಇಂದು ಕರ್ನಾಟಕದ ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳಲ್ಲಿ ರಾರಾಜಿಸುತ್ತಿದೆ. ಇದು ನಮ್ಮ ಕರ್ನಾಟಕದ ಸಾಂಸ್ಕೃತಿಕ ಘನತೆಯನ್ನು ಹೆಚ್ಚಿಸಿದೆ. ಹೀಗಾಗಿ ಬೆಳಗಲ್ಲು ವೀರಣ್ಣ ಅವರ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಯನ್ನು ಕಾಳೆ ಮಾಸ್ತರ್ ಘೋಷಿಸಲಾಗಿದೆ ಎಂದು ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್ ನ ಶ್ರೀ ಮತಿ ಲಕ್ಷ್ಮಿದೇವಿಯವರು ತಿಳಿಸಿದ್ದಾರೆ. 93 ನೇ ವಯಸ್ಸಿನ ಕಾಳೆ ಮಾಸ್ತರ್ ಗೆ ರಾಜ್ಯೋತ್ಸವ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ, ಎರಡು ವಿವಿಗಳ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿವೆ.

–Nd Thippeswamy


Vishwanath Guggari
";